ಸಮಗ್ರ ಪರಿಚಯ

ಸಮಗ್ರ ಪರಿಚಯ :

ಪ್ರಗತಿಶೀಲ ಸಾಹಿತ್ಯದ ಮುದ್ರಣ, ಪ್ರಕಾಶನ ಹಾಗೂ ಪ್ರಸಾರದ ಉದ್ದೇಶದಿಂದ ಸಮಾನಮನಸ್ಕ ಸಾಹಿತ್ಯಪ್ರಿಯರು, ಚಿಂತಕರು ಮತ್ತು ಸಾಮಾಜಿಕ ಕಾರ್ಯಕರ್ತರು ಸೇರಿ 1960ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಿದ ಸಂಸ್ಥೆ ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ . ಆ ಸಮಯದಲ್ಲಿ ಪುಸ್ತಕ ಚಟುವಟಿಕೆಗಳ ಮುಖ್ಯ ಕೇಂದ್ರಗಳಾಗಿದ್ದ ನ್ಯೂ ಸೆಂಚುರಿ ಬುಕ್ ಹೌಸ್ (ಬೆಂಗಳೂರು), ಪ್ರಭಾತ್ ಬುಕ್ ಹೌಸ್ (ಮಂಗಳೂರು) ಮತ್ತು ಮುದ್ರಣ, ಪ್ರಕಾಶನ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಜನಶಕ್ತಿ ಪ್ರಿಂಟರ್ಸ್ (ಬೆಂಗಳೂರು)- ಈ ಮೂರು ಸಂಸ್ಥೆಗಳು ಅದೇ ವರ್ಷ (1960) ನವಕರ್ನಾಟಕದೊಂದಿಗೆ ವಿಲೀನಗೊಂಡು ಅದನ್ನು ಬಲಪಡಿಸಿದವು. ನಂತರದ ವರ್ಷಗಳಲ್ಲಿ ಪ್ರಗತಿಪಥದಲ್ಲಿ ಸಾಗಿದ ಈ ಸಂಸ್ಥೆ 1987ರಲ್ಲಿ ತನ್ನ ಪ್ರಧಾನ ಕಛೇರಿಯನ್ನು ಈಗಿನ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿತು. ಇದೇ ಕಟ್ಟಡದಲ್ಲಿ ಪುಸ್ತಕಗಳ ಸಗಟು ಮಾರಾಟಕ್ಕೆ ಪ್ರತ್ಯೇಕ ಮಳಿಗೆಯನ್ನು ತರೆಯಲಾಯಿತು. ಆಧುನಿಕ ಮುದ್ರಣ ತಂತ್ರಜ್ಞಾನವನ್ನು ಅಳವಡಿಸುವ ಹಾಗೂ ವಿಶಾಲವಾದ ಸ್ಥಳಕ್ಕೆ ವರ್ಗಾಯಿಸುವ ಸಲುವಾಗಿ ಬೆಂಗಳೂರಿನ ಗಾಂಧಿನಗರದಲ್ಲಿದ್ದ ಹಳೆಯ ಮುದ್ರಣಾಲಯವನ್ನು ಮುಚ್ಚಿ, 1991ರಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಹೊಸ ಮುದ್ರಣಾಲಯವನ್ನು ಸ್ಥಾಪಿಸಲಾಯಿತು. ಆ ವೇಳೆಗಾಗಲೇ ಪುಸ್ತಕಗಳ ದಾಸ್ತಾನಿಗಾಗಿ ಪೀಣ್ಯದಲ್ಲೇ ಗೋದಾಮನ್ನು (1984) ಕೂಡ ಕಟ್ಟಲಾಗಿತ್ತು. ಮೈಸೂರು (1989) ಮತ್ತು ಗುಲಬರ್ಗಾ (1991) ನಗರಗಳಲ್ಲಿ ಹೊಸದಾಗಿ ಪುಸ್ತಕ ಮಳಿಗೆಗಳನ್ನು ತೆರೆಯಲಾಯಿತು. ಬೆಂಗಳೂರಿನ ಕೆಂಪೇಗೌಡ ವೃತ್ತದಲ್ಲಿ ಸಂಸ್ಥೆಯ ಪ್ರಾರಂಭದಿಂದಲೇ (1960) ಇದ್ದ ಪುಸ್ತಕ ಮಳಿಗೆಯನ್ನು ಗಾಂಧಿನಗರದಲ್ಲಿ ಹಳೆಯ ಮುದ್ರಣಾಲಯವಿದ್ದ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು (2002). ಪುಸ್ತಕ ಪ್ರದರ್ಶನಗಳನ್ನು ಏರ್ಪಡಿಸುವುದರ ಮೂಲಕ ರಾಜ್ಯದ ಮೂಲೆಮೂಲೆಗಳಿಗೆ ಸದಭಿರುಚಿಯ ಓದನ್ನು ಪ್ರಸರಿಸುತ್ತ ಬಂದಿರುವ ನವಕರ್ನಾಟಕ ಈಗ ಎಂಟು ಸಂಚಾರಿ ಪ್ರದರ್ಶನ ತಂಡಗಳನ್ನು ಹೊಂದಿದ್ದು, ಆಯ್ದ ಜಿಲ್ಲಾ-ತಾಲೂಕು ಕೇಂದ್ರಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಕಾರ್ಖಾನೆ-ಕಛೇರಿಗಳಲ್ಲಿ ಪುಸ್ತಕ ಪ್ರದರ್ಶನಗಳನ್ನು ಏರ್ಪಡಿಸುತ್ತಾ ವರ್ಷಪೂರ್ತಿ ಪುಸ್ತಕಯಾತ್ರೆಯಲ್ಲಿ ತೊಡಗಿಕೊಂಡಿದೆ. ತನ್ನದೇ ಆದ ಸಂಪಾದಕ ಮಂಡಳಿ, ಪುಸ್ತಕ ಹಾಗೂ ಪತ್ರಿಕಾ ವಿಭಾಗ, ಗಣಕೀಕೃತ ಅಕ್ಷರ ಜೋಡಣೆ ಮತ್ತು ವಿನ್ಯಾಸ, ಮುದ್ರಣಾಲಯ, ಐದು ಪುಸ್ತಕ ಮಳಿಗೆಗಳ ಹಾಗೂ ಎಂಟು ಪ್ರದರ್ಶನ ತಂಡಗಳ ಮೂಲಕ ರಾಜ್ಯಾದ್ಯಂತ ಅತ್ಯುತ್ತಮ ಮಾರಾಟ ಜಾಲ - ಇವೆಲ್ಲವನ್ನೂ ಹೊಂದಿರುವ ಕರ್ನಾಟಕದ ಏಕೈಕ ಪೂರ್ಣಪ್ರಮಾಣದ ಸುಸಜ್ಜಿತ ಪ್ರಕಾಶನ ಸಂಸ್ಥೆಯಾಗಿ ನವಕರ್ನಾಟಕ ಈಗ ಬೆಳೆದುನಿಂತಿದೆ.

ನವಕರ್ನಾಟಕ ಪ್ರಕಾಶನ ಸಂಸ್ಥೆ ಕಳೆದ ಐದು ದಶಕಗಳಿಂದ ಪುಸ್ತಕಗಳ ಪ್ರಕಾಶನ - ಪ್ರದರ್ಶನ - ಮಾರಾಟ ಚಟುವಟಿಕೆ ಹಾಗೂ ವಾಚನಾಭಿವೃದ್ಧಿಯ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಕನ್ನಡದಲ್ಲಿ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತ ಬಂದಿದೆ. ಪುಸ್ತಕಗಳ ಮೂಲಕ ಮನುಕುಲದ ಸೇವೆ ಎಂಬುದೇ ಇದರ ಧ್ಯೇಯವಾಕ್ಯ. 2009-10 ಹಾಗೂ 2010-11ರಲ್ಲಿ ತನ್ನ ಚಿನ್ನದ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ನವಕರ್ನಾಟಕ ಪ್ರಕಾಶನ ಈ ಸಂದರ್ಭಕ್ಕೆಂದೇ ಹಲವು ಉತ್ಕೃಷ್ಟ ಕೃತಿಗಳನ್ನು ಪ್ರಕಟಿಸಿದೆ.

ಈವರೆಗೆ 3100ಕ್ಕೂ ಹೆಚ್ಚು ಪ್ರಕಟಣೆಗಳನ್ನು ಹೊರತಂದಿರುವ ನವಕರ್ನಾಟಕ ಪ್ರಕಾಶನದ ಅನೇಕ ಶೀರ್ಷಿಕೆಗಳು ಹಲವಾರು ಮರುಮುದ್ರಣಗಳನ್ನು ಕಂಡಿರುವುದು ಅವುಗಳ ಜನಪ್ರಿಯತೆಗೆ ಸಾಕ್ಷಿ. ಜನಪರ ಸಾಹಿತ್ಯ ಪ್ರಸಾರದ ಮೂಲಕ ನಾಡಿನ ಬುದ್ಧಿಜೀವಿಗಳಿಂದ ಹಿಡಿದು ಜನಸಾಮಾನ್ಯರವರೆಗೆ ಓದುಗರ ದೊಡ್ಡ ಬಳಗವನ್ನೇ ಈ ಸಂಸ್ಥೆ ಹೊಂದಿದೆ. ಪ್ರಕಾಶನ ಕ್ಷೇತ್ರದ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಕೂಡ ತನ್ನದಾಗಿಸಿಕೊಂಡಿದೆ.

ಕನ್ನಡ ಪುಸ್ತಕ ಸಂಸ್ಕೃತಿಯನ್ನು ಹರಡಲು ಗಣನೀಯ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರವು ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗೆ 2006ರ ‘ಅತ್ಯುತ್ತಮ ಪ್ರಕಾಶನ ಸಂಸ್ಥೆ’ ಪ್ರಶಸ್ತಿ ನೀಡಿ ಗೌರವಿಸಿದೆ.

ಭಾರತೀಯ ಪ್ರಕಾಶಕರ ಮತ್ತು ಪುಸ್ತಕ ಮಾರಾಟಗಾರರ ಸಂಘಗಳ ಒಕ್ಕೂಟ (FPBAI, New Delhi) 2008ರಲ್ಲಿ ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗೆ ‘ಅತ್ಯುತ್ತಮ ಪ್ರಾದೇಶಿಕ ಪ್ರಕಾಶನ ಸಂಸ್ಥೆ’ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.

ಕನ್ನಡ ಸಾಹಿತ್ಯ ಪರಿಷತ್ತು 2010ರ ‘ಅತ್ಯುತ್ತಮ ಪ್ರಕಾಶಕ - ಅಂಕಿತ ಪುಸ್ತಕ - ಪುರಸ್ಕಾರ’ವನ್ನು ನವಕರ್ನಾಟಕ ಪ್ರಕಾಶನ ಸಂಸ್ಥೆಗೆ ನೀಡಿದೆ.

ವಿವಿಧ ವಿಷಯಗಳ ಕುರಿತು ಕನ್ನಡ ಪುಸ್ತಕಗಳನ್ನು ಮಾತ್ರವಲ್ಲದೆ, ಇಂಗ್ಲಿಷ್ ಹಾಗೂ ಹಿಂದಿ ಪುಸ್ತಕಗಳನ್ನು, ಕನ್ನಡ ಹಾಗೂ ಇಂಗ್ಲಿಷ್ ಚಿತ್ರಪಟಗಳನ್ನು ನವಕರ್ನಾಟಕ ಪ್ರಕಟಿಸಿದೆ. ಓದುಗರೊಂದಿಗೆ ಐದು ದಶಕಗಳ ಆತ್ಮೀಯ ಒಡನಾಟವನ್ನು ಬೆಳೆಸಿಕೊಂಡು ಬಂದಿರುವ ಈ ಸಂಸ್ಥೆಯ ಪ್ರಕಟಣಾ ವೈವಿಧ್ಯ ಅಭೂತಪೂರ್ವ ಸಾಧನೆ.

ಕಥೆ, ಕಾದಂಬರಿ, ಕವನ, ಆತ್ಮಕಥೆ, ನಾಟಕ-ರಂಗಭೂಮಿ, ವಿಮರ್ಶೆ, ಪ್ರವಾಸ, ಚಿತ್ರಕಲೆ, ಶಿಕ್ಷಣ, ಸಂಶೋಧನೆ, ಪರಾಮರ್ಶನ, ಪದಕೋಶ, ವ್ಯಾಕರಣ, ಗಣಿತ, ವಿಜ್ಞಾನ, ಜನಪ್ರಿಯ ವಿಜ್ಞಾನ, ಪರಿಸರ - ವನ್ಯಜೀವಿ ಸಂರಕ್ಷಣೆ, ತಂತ್ರಜ್ಞಾನ, ಇಂದ್ರಜಾಲ, ವಿಚಾರ ಸಾಹಿತ್ಯ, ತತ್ವಶಾಸ್ತ್ರ, ಜೀವನ ಚರಿತ್ರೆ, ಸಾಮಾಜಿಕ - ರಾಜಕೀಯ, ಕಾನೂನು, ಸಮಾಜ ವಿಜ್ಞಾನ, ಇತಿಹಾಸ, ವ್ಯಕ್ತಿತ್ವ ವಿಕಾಸ, ಆರೋಗ್ಯ - ವೈದ್ಯಕೀಯ, ಮನೋವಿಜ್ಞಾನ, ಯೋಗ, ಅಡುಗೆ, ಕೃಷಿ, ಸಾಮಾನ್ಯ ಜ್ಞಾನ ಇತ್ಯಾದಿ ವಿಷಯಗಳ ಪುಸ್ತಕಗಳೇ ಅಲ್ಲದೆ ನೋಡಿ-ಕಲಿ, ಪುಟಾಣಿ ಪುಸ್ತಕ ಮಾಲೆ, ನವಕರ್ನಾಟಕ ಕಿರಿಯರ ಕಥಾಮಾಲೆ, ಅಕ್ಷರ ಕಿರಣ, ನೋಡುತ್ತ ಆಡುತ್ತ ಕಲಿಯೋಣ ಬಾ, ಚಿತ್ರಕಲಾ ಮಾಲಿಕೆ, ಜ್ಞಾನ-ವಿಜ್ಞಾನ ಮಾಲೆ, ಲೋಕಜ್ಞಾನ ಮಾಲೆ, ವಿಜ್ಞಾನ - ಸರಳ ಪರಿಚಯ, ಬಳಕೆಯಂತ್ರ ಕೈಪಿಡಿ, ತೋಟದಿಂದ ತಾಟಿಗೆ, ವ್ಯಕ್ತಿ ವಿಕಸನ ಮಾಲೆ, ಗ್ರಾಹಕ ಜಾಗೃತಿ ಮಾಲಿಕೆ, ಕ್ರಾಂತಿ ಕಿಡಿಗಳು, ಹೊಸತು ವಾಚಿಕೆ, ನವಕರ್ನಾಟಕ ಸಾಹಿತ್ಯ ಸಂಪದ, ವನಿತಾ ಚಿಂತನ ಮಾಲೆ, ವಿಶ್ವಕಥಾಕೋಶ, Global Philosophy for Everyman, Citizen's Guide ಮತ್ತು Law in Everyday Life ಮುಂತಾದ ಮಾಲಿಕೆಗಳಡಿ ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದ ಹಲವಾರು ಪುಸ್ತಕಗಳನ್ನು ಪ್ರಕಟಿಸಿದೆ ಹಾಗೂ ಮುಂದೆಯೂ ಪ್ರಕಟಿಸಲಿದೆ.

ದೇಶದ ಬೇರೆ ಬೇರೆ ಭಾಷೆಗಳ ಕಥಾ ಸಾಹಿತ್ಯ, ವಿಜ್ಞಾನ, ತತ್ವಶಾಸ್ತ್ರ ಹಾಗೂ ವಿಚಾರ ಸಾಹಿತ್ಯದ ಕೃತಿಗಳನ್ನು ಕನ್ನಡಿಗರಿಗೆ ಒದಗಿಸುತ್ತಿದೆ. ರವೀಂದ್ರನಾಥ ಠಾಕೂರ್, ಪ್ರೇಮಚಂದ್, ರಾಹುಲ ಸಾಂಕೃತ್ಯಾಯನ, ಭೀಷ್ಮ ಸಾಹನಿ, ಜಯಕಾಂತನ್, ಡಾ|| ದೇವಿಪ್ರಸಾದ ಚಟ್ಟೋಪಾಧ್ಯಾಯ, ಎಸ್. ಜಿ. ಸರದೇಸಾಯಿ, ಹಿರೇನ್ ಮುಖರ್ಜಿ, ರೊಮಿಲಾ ಥಾಪರ್, ಪ್ರೊ|| ಆರ್. ಎಸ್. ಶರ್ಮಾ, ಡಾ|| ಅಬ್ರಹಾಂ ಕೋವೂರ್, ಭಗವತ್ ಶರಣ ಉಪಾಧ್ಯಾಯ, ತಾಪಿ ಧರ್ಮಾರಾವು, ವಿ. ಕಾ. ರಾಜವಾಡೆ, ಹಿಮಾಂಶು ಜೋಶಿ, ಓಲ್ಗ, ಲಕ್ಷ್ಮಣರಾವ್ ಗಾಯಕವಾಡ್, ಮಾಧವಿ ದೇಸಾಯಿ, ಎಂ. ಟಿ. ವಾಸುದೇವನ್ ನಾಯರ್, ಸಾರಾ ಜೋಸೆಫ್, ಬಾಮಾ, ಮಹಾಶ್ವೇತಾದೇವಿ, ಬೇಬಿ ಹಾಲ್ದಾರ್ - ಮುಂತಾದವರ ಕೃತಿಗಳನ್ನು ಕನ್ನಡದಲ್ಲಿ ಪ್ರಕಟಿಸಿದೆ. ಹಿಂದಿ, ಬಂಗಾಳಿ, ಮರಾಠಿ, ತೆಲುಗು, ತಮಿಳು, ಮಲೆಯಾಳಂ, ಇಂಗ್ಲಿಷ್, ರಷ್ಯನ್ ಭಾಷೆಗಳಿಂದ ಕನ್ನಡಕ್ಕೆ ಒಳ್ಳೆಯ ಓದನ್ನು ಒದಗಿಸಿರುವ ನವಕರ್ನಾಟಕ ಪ್ರಕಾಶನ ಅತಿ ಹೆಚ್ಚು ಪ್ರಮಾಣದಲ್ಲಿ ಕನ್ನಡ ಭಾಷಾಂತರಗಳನ್ನು ಪ್ರಕಟಿಸಿದ ಖಾಸಗಿ ಪ್ರಕಾಶನ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಯಾವ ವಿಷಯವೇ ಆದರೂ ಅತ್ಯುತ್ತಮವಾದುದನ್ನು ಓದುಗರಿಗೆ ನೀಡಬೇಕು ಎಂಬ ಕಾಳಜಿ ಇರುವ ನವಕರ್ನಾಟಕ ಕಿರಿಯರನ್ನೂ ಮರೆತಿಲ್ಲ. ಮಕ್ಕಳಿಗೆ ನಿನ್ನೆಯ ಕಥೆಗಳು, ನಾಳೆಯ ಕಥೆಗಳು, ನೋಡಿ-ಕಲಿ, ಪುಟಾಣಿ ಪುಸ್ತಕ, ನೋಡುತ್ತ ಆಡುತ್ತ ಕಲಿಯೋಣ ಬಾ, ನವಕರ್ನಾಟಕ ಕಿರಿಯರ ಕಥಾಮಾಲೆ ಇತ್ಯಾದಿ ಮಾಲೆಗಳಲ್ಲಿ ಹಲವಾರು ಸಚಿತ್ರ ಪುಸ್ತಕಗಳನ್ನು, ಹಾಗೆಯೇ ಮಕ್ಕಳ ನಾಟಕಗಳು, ಸಚಿತ್ರ ಪದ್ಯ ಸಂಕಲನಗಳನ್ನೂ, ಚಟುವಟಿಕೆ ಪುಸ್ತಕಗಳನ್ನು ಪ್ರಕಟಿಸಿದೆ. ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ನೋಡಿ-ಕಲಿ ((Look-Learn) ಮತ್ತು ಪುಟಾಣಿ ಪುಸ್ತಕಗಳು (Mini Books) ಮಾಲೆಗಳಲ್ಲಿ ಮಕ್ಕಳಿಗಾಗಿ ಬಹುವರ್ಣದ ಸಚಿತ್ರ ಪುಸ್ತಕಗಳನ್ನು ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ವ್ಯಾಕರಣ, ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಜನಪ್ರಿಯ ವಿಜ್ಞಾನ ಹಾಗೂ ಆರೋಗ್ಯದ ಪುಸ್ತಕಗಳನ್ನೂ ಹೊರತಂದಿದೆ.

ಅಲ್ಲದೆ, ಚಿಣ್ಣರಿಗಾಗಿ ನವಕರ್ನಾಟಕ ಚಿತ್ರ ಖಜಾನೆ (Navakarnataka Picture Treasure) ಮಾಲೆಯಲ್ಲಿ ಹಲವು ವರ್ಣರಂಜಿತ ಚಿತ್ರಪಟಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟಿಸುತ್ತಿದೆ.

ಸಾಹಿತ್ಯ ಅಕಾಡೆಮಿ, ಜ್ಞಾನಪೀಠ, ಪಂಪ ಇವೇ ಮುಂತಾದ ಪ್ರತಿಷ್ಠಿತ ಪ್ರಶಸ್ತಿ ವಿಜೇತ ಹಾಗೂ ಇತರ ಹಿರಿಯ, ಹೆಸರಾಂತ ಕನ್ನಡ ಸಾಹಿತಿಗಳ ಭಾವಚಿತ್ರಗಳನ್ನು ನುರಿತ ಕಲಾವಿದರಿಂದ ರಚಿಸಿ ನವಕರ್ನಾಟಕ ಪ್ರಕಟಿಸಿದೆ. 1/4 ಡಿಮೈ ಗಾತ್ರದ ಈ ವರ್ಣರಂಜಿತ ಭಾವಚಿತ್ರಗಳ ಹಿಂಭಾಗದಲ್ಲಿ ಆಯಾ ಸಾಹಿತಿಗಳ ಬಗ್ಗೆ ಮಾಹಿತಿ ಕೂಡ ನೀಡಲಾಗಿದೆ.

ನವಸಾಕ್ಷರರಿಗಾಗಿ ಅಕ್ಷರ ಕಿರಣ ಮಾಲಿಕೆಯಲ್ಲಿ ಸರಳ ನಿರೂಪಣೆಯ ನೂರಾರು ಸಚಿತ್ರ ಪುಸ್ತಕಗಳನ್ನು ನವಕರ್ನಾಟಕ ಪ್ರಕಾಶನ ಹೊರತಂದಿದ್ದು, ರಾಜ್ಯದಲ್ಲಿ ಈವರೆಗೆ ನವಸಾಕ್ಷರರಿಗಾಗಿ ರಚಿಸಲಾದ ಪುಸ್ತಕಗಳಲ್ಲೇ ಇವು ಅತ್ಯುತ್ತಮವೆಂದು ತಜ್ಞರಿಂದ ಶ್ಲಾಘಿಸಲ್ಪಟ್ಟಿವೆ.

ಒಳ್ಳೆಯ ಓದನ್ನು ಒದಗಿಸುವ ಧ್ಯೇಯ ಹೊತ್ತ ಈ ಸಂಸ್ಥೆ ತನ್ನ ಪ್ರಕಟಣೆಗಳಲ್ಲದೆ, National Book Trust (NBT), Children's Book Trust (CBT), ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಭಾರತದ ಹಲವು ಖಾಸಗಿ ಪ್ರಕಾಶನದ ಸಂಸ್ಥೆಗಳ ಅಧಿಕೃತ ವಿತರಕರಾಗಿದ್ದು ಅವರ ಪ್ರಕಟಣೆಗಳನ್ನು ಮಾರುಕಟ್ಟೆಗೆ ಒದಗಿಸುತ್ತಿದೆ. World Health Organisation (WHO), Council for Scientific and Industrial Research (CSIR), National Institute for Advanced Studies (NIAS), Centre for Wildlife Studies (CWS) ಮುಂತಾದವರ ಸಹಯೋಗದೊಂದಿಗೆ ಹಲವು ಉಪಯುಕ್ತ ಪುಸ್ತಕಗಳನ್ನು ಕನ್ನಡದಲ್ಲಿ ಪ್ರಕಟಿಸಿದೆ.

ಮಾಸ್ಕೋದ ರಾದುಗ, ಪ್ರಗತಿ ಮತ್ತು ಮಿರ್ ಪ್ರಕಾಶನ ಸಂಸ್ಥೆಗಳ ಸಹಯೋಗದೊಂದಿಗೆ ಹಲವಾರು ಜನಪ್ರಿಯ ವಿಜ್ಜ಼ಾನ, ಮಕ್ಕಳ ಪುಸ್ತಕ ಹಾಗೂ ಸಾಹಿತ್ಯ ಕೃತಿಗಳನ್ನು ನವಕರ್ನಾಟಕ ಕನ್ನಡದಲ್ಲಿ ಪ್ರಕಟಿಸಿದೆ. ಮಾಸ್ಕೋದ ರಾದುಗ ಪ್ರಕಾಶನ ಹಾಗೂ ನವಕರ್ನಾಟಕ ಜಂಟಿಯಾಗಿ ಹೊರತಂದ ಮುದ್ದು ಕನ್ನಡ ಕನ್ನಡದ ಮೊದಲ ಕಲಿಕೆಯ ಅತ್ಯುತ್ತಮ ಪುಸ್ತಕವೆಂದು ಮನ್ನಣೆಗೆ ಪಾತ್ರವಾಗಿದೆ. ಇದಲ್ಲದೆ, ಆಗಿನ ಸೋವಿಯತ್ ಒಕ್ಕೂಟದಿಂದ ಪ್ರಕಟವಾಗುತ್ತಿದ್ದ ಸುಲಭ ಬೆಲೆಯ ಉತ್ತಮ ಗುಣಮಟ್ಟದ ಪುಸ್ತಕಗಳು, ನಿಯತಕಾಲಿಕಗಳು, ಧ್ವನಿಸುರುಳಿಗಳು, ಅಂಚೆಚೀಟಿಗಳು ಇವೇ ಮುಂತಾದ ಜ್ಞಾನವಾಹಕಗಳನ್ನು ಆಸಕ್ತರಿಗೆ ಒದಗಿಸಿದ ಸಂಸ್ಥೆ ನವಕರ್ನಾಟಕ.

ಇಂಗ್ಲಿಷಿನಲ್ಲಿಯೂ ಹಲವಾರು ಪುಸ್ತಕಗಳನ್ನು ಪ್ರಕಟಿಸಿದೆ. ಡಾ|| ದೇವಿಪ್ರಸಾದ ಚಟ್ಟೋಪಾಧ್ಯಾಯ ಅವರ ಸಂಪಾದಕತ್ವದಲ್ಲಿ Global Philosophy For Everyman ಶೀರ್ಷಿಕೆಯಲ್ಲಿ ತತ್ವಶಾಸ್ತ್ರದ ಎಂಟು ಸಂಪುಟಗಳನ್ನು ಪ್ರಕಟಿಸಿರುವುದು ಅತ್ಯಂತ ಮಹತ್ವದ ಯೋಜನೆ (1990-91). Dunkel Draft - Design for Disaster (B. K. Chandrashekar, S. Chatterjee), Milestones in Science and Technology (Comp.:K. Gopinath), God - A Creation of Man (A. N. Moorthy Rao), Keeping Faith with the Mother Tongue (Sugata Srinivasaraju), A Window on the Wall - 'Quit India' Prison Diary of a 19-Year-Old (H. Y. Sharada Prasad) ಮುಂತಾದವು ಮಹತ್ವದ ಕೃತಿಗಳು. Citizen's Guide (Y. G. Muralidharan) ಮಾಲಿಕೆಯಲ್ಲಿ The Right to Information Act - 2005 ಮತ್ತಿತರ ಕೃತಿಗಳು ಪ್ರಕಟವಾಗಿವೆ. ಇವಲ್ಲದೆ ಇನ್ನೂ ಅನೇಕ ಇಂಗ್ಲಿಷ್ ಪುಸ್ತಕಗಳು ಮತ್ತು ಕೆಲವು ಹಿಂದಿ ಪುಸ್ತಕಗಳು ಹೊರಬಂದಿವೆ.

 

1962ರಲ್ಲಿ ಖ್ಯಾತ ರಷ್ಯನ್ ಕಾದಂಬರಿಕಾರ ನಿಕೊಲಾಯಿ ಆಸ್ತ್ರೋವ್‌ಸ್ಕಿ ಅವರ ಅಗ್ನಿದೀಕ್ಷೆ , 1975ರಲ್ಲಿ ನಿರಂಜನರ ಪ್ರಸಿದ್ಧ ಕಾದಂಬರಿ ಚಿರಸ್ಮರಣೆ, 1978ರಲ್ಲಿ ರಾಹುಲ ಸಾಂಕೃತ್ಯಾಯನರ ಜಗದ್ವಿಖ್ಯಾತ ಕೃತಿ ವೋಲ್ಗಾ-ಗಂಗಾ -ಇವಲ್ಲದೆ, ಸಮಾಜವಾದಿ ಚಿಂತನೆಯ ಅನೇಕ ಕಿರುಹೊತ್ತಗೆಗಳ ಪ್ರಕಟನೆ ನವಕರ್ನಾಟಕದ ಆರಂಭದ ದಶಕಗಳ ಸಾಧನೆ.

1980-82ರಲ್ಲಿ ನಿರಂಜನರ ಸಂಪಾದಕತ್ವದಲ್ಲಿ ವಿಶ್ವ ಕಥಾ ಕೋಶ ಎಂಬ ಬೃಹತ್ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದೆ. ಜಗತ್ತಿನ ನೂರಾರು ದೇಶಗಳ, ಹಲವಾರು ಭಾಷೆಗಳ, 324 ಕಥೆಗಳನ್ನು ಕನ್ನಡದ ವಿವಿಧ ಲೇಖಕರಿಂದ ಅನುವಾದಿಸಿ, ಇಪ್ಪತ್ತೈದು ಸಂಪುಟಗಳಲ್ಲಿ ಪ್ರಕಟಿಸಿದೆ. ಸಾಹಿತ್ಯಾಸಕ್ತರಿಂದ, ವಿಮರ್ಶಕರಿಂದ ಪ್ರಶಂಸಿಸಲ್ಪಟ್ಟ ಈ ಸಂಪುಟಗಳ ವಿಮರ್ಶೆಯ ಗಾತ್ರವೇ ಮುನ್ನೂರು ಪುಟಗಳಿಗೆ ಮೀರಿದೆ. ಭಾರತೀಯ ಭಾಷೆಗಳಲ್ಲೇ ಇಂಥ ಯೋಜನೆ ಇದೇ ಮೊದಲು. ನವಕರ್ನಾಟಕದ ಚಿನ್ನದ ಹಬ್ಬದ ಸಂದರ್ಭದಲ್ಲಿ ಈ ಸಂಪುಟಗಳನ್ನು 2011ರ ಎಪ್ರಿಲ್ ತಿಂಗಳಲ್ಲಿ ಮರುಮುದ್ರಣ ಮಾಡಲಾಯಿತು.

1985-86ರಲ್ಲಿ ಸಂಸ್ಥೆಯ ಇಪ್ಪತ್ತೈದನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ನವಕರ್ನಾಟಕ ನಾಲೆಜ್ ಬ್ಯಾಂಕ್ ಮತ್ತು ಬುಕ್ ಬಾಂಡ್ ಯೋಜನೆಗಳನ್ನು ಬಳಕೆಗೆ ತಂದುದರಿಂದ ಪುಸ್ತಕ ಮಾರಾಟ ವಿಸ್ತರಣೆಗೆ ಬಹಳ ಸಹಾಯಕವಾಯಿತು. ಅದೇ ವರ್ಷ ‘ಬೆಳ್ಳಿ-ಬೆಳಕು’ ಎಂಬ ಅಂಕಿತದೊಂದಿಗೆ ಹಲವು ಉತ್ಕೃಷ್ಟ ಪ್ರಕಟಣೆಗಳನ್ನೂ ಹೊರತರಲಾಯಿತು.

ಸಂಸ್ಥೆಯ ಸ್ಥಾಪಕ ನಿರ್ದೇಶಕರಲ್ಲೊಬ್ಬರಾದ ಶ್ರೀ ಬಿ. ವಿ. ಕಕ್ಕಿಲ್ಲಾಯ ಅವರು ಮಾರ್ಕ್ಸ್‌ವಾದಿ ವಿಚಾರಧಾರೆ ಮಾಲಿಕೆಯಲ್ಲಿ ರಚಿಸಿದ ಕಾರ್ಲ್ ಮಾರ್ಕ್ಸ್: ಬದುಕು-ಬರೆಹ ಮತ್ತು ಫ್ರೆಡರಿಕ್ ಎಂಗೆಲ್ಸ್: ಜೀವನ ಚಿಂತನ ಕೃತಿಗಳು 1985-86ರಲ್ಲಿ ಪ್ರಕಟಗೊಂಡವು. ಅವುಗಳು ಕ್ರಮವಾಗಿ ‘ಸೋವಿಯತ್ ಲ್ಯಾಂಡ್ ನೆಹರೂ ಪುರಸ್ಕಾರ’ ಮತ್ತು ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ಗಳಿಗೆ ಪಾತ್ರವಾದವು. ಕಕ್ಕಿಲ್ಲಾಯ ಅವರ ಸಂಪಾದಕತ್ವದಲ್ಲಿ ಕ್ರಾಂತಿ ಕಿಡಿಗಳು ಮಾಲಿಕೆಯಡಿ ಭಾರತದ ಇತಿಹಾಸದಿಂದ ಆಯ್ದ ಕ್ರಾಂತಿಕಾರಿ ಘಟನೆಗಳ ಬಗ್ಗೆ ಹಾಗೂ ಕ್ರಾಂತಿಕಾರಿ ವ್ಯಕ್ತಿಗಳ ಬಗ್ಗೆ ಕಿರು ಪರಿಚಯ ನೀಡುವ 15 ಪುಸ್ತಿಕೆಗಳನ್ನು 1986-87ರಲ್ಲಿ ಪ್ರಕಟಿಸಲಾಯಿತು. ಇವೆಲ್ಲವೂ ‘ಬೆಳ್ಳಿ-ಬೆಳಕು’ ಪ್ರಕಟಣೆಗಳು.

1986ರಿಂದಲೇ ಆರೋಗ್ಯ-ವೈದ್ಯಕೀಯ ಪುಸ್ತಕಗಳಿಗೆ ವಿಶೇಷ ಗಮನಹರಿಸಿದುದರಿಂದ ಖ್ಯಾತ ವೈದ್ಯಸಾಹಿತಿಗಳ ಹಲವಾರು ಉಪಯುಕ್ತ ಕೃತಿಗಳು ಬೆಳಕಿಗೆ ಬಂದವು. ಮುಖ್ಯವಾಗಿ, ಡಾ|| ಸಿ. ಆರ್. ಚಂದ್ರಶೇಖರ್ ಅವರು ರಚಿಸಿರುವ, ಅನುವಾದಿಸಿರುವ ಹಾಗೂ ಸಂಪಾದಿಸಿರುವ ಸುಮಾರು 100 ಕೃತಿಗಳು ನವಕರ್ನಾಟಕದಿಂದ ಪ್ರಕಟಗೊಂಡು, ಅವುಗಳಲ್ಲಿ ಹಲವು ಕೃತಿಗಳು ಮತ್ತೆ ಮರುಮುದ್ರಣಗೊಂಡು ಈವರೆಗೆ (2011) ನಾಲ್ಕು ಲಕ್ಷ ಪ್ರತಿಗಳಿಗೂ ಹೆಚ್ಚು ಮಾರಾಟವಾಗಿರುವುದು ಕನ್ನಡ ಪ್ರಕಾಶನ ಕ್ಷೇತ್ರದಲ್ಲೇ ಅಪೂರ್ವ ದಾಖಲೆಯಾಗಿದೆ. ನವಕರ್ನಾಟಕ ಪ್ರಕಟಿಸಿದ ಡಾ|| ಸಿ. ಆರ್. ಸಿ. ಅವರ ಪುಸ್ತಕಗಳು ಅತ್ಯಂತ ಜನಪ್ರಿಯವಾಗಿರುವುದಲ್ಲದೆ ಅನೇಕ ಪ್ರಶಸ್ತಿಗಳನ್ನು ಗಳಿಸಿ, ಇತರ ಹಲವು ಭಾರತೀಯ ಭಾಷೆಗಳಿಗೆ ಮತ್ತು ಇಂಗ್ಲಿಷ್‌ಗೆ ಅನುವಾದಗೊಂಡಿವೆ.

 

1993ರಲ್ಲಿ ಕರ್ನಾಟಕ ಸರ್ಕಾರದ ಪಠ್ಯಪುಸ್ತಕ ಕನ್ನಡ ಭಾರತಿ - 9, 1994ರಲ್ಲಿ ಪ್ರೌಢಶಾಲೆಯ 8,9,10ನೇ ತರಗತಿಗಳಿಗೆ ಕನ್ನಡ ಪ್ರಥಮ ಭಾಷೆಯ ಪುಸ್ತಕಗಳು ಹಾಗೂ ತಮಿಳು, ತೆಲುಗು, ಸಂಸ್ಕೃತ ಭಾಷೆಗಳೂ ಸೇರಿದಂತೆ ಒಟ್ಟು ಎಂಟು ಪಠ್ಯಪುಸ್ತಕಗಳನ್ನು ಪ್ರಕಟಿಸಿ, ಯಾವೊಂದು ತಡೆಯಿಲ್ಲದೆ ಸತತವಾಗಿ ಮಾರುಕಟ್ಟೆಗೆ ಒದಗಿಸಿದ ಈ ಸಂಸ್ಥೆ, ಇತರ 15 ಖಾಸಗಿ ಪಠ್ಯಪುಸ್ತಕ ಪ್ರಕಾಶಕರು ಹೊರತಂದ ಎಲ್ಲಾ ಪಠ್ಯಪುಸ್ತಕಗಳನ್ನು ರಾಜ್ಯಾದ್ಯಂತ ವಿತರಿಸಿದೆ. 1993ರಲ್ಲಿ ಖಾಸಗಿ ಪ್ರಕಾಶಕರು ಪ್ರಕಟಿಸಿದ ಒಟ್ಟು ಪುಸ್ತಕಗಳ ಕಾಲು ಭಾಗದಷ್ಟನ್ನು ತಾನೇ ವಿತರಿಸಿ, ವಿತರಣೆಯಲ್ಲಿ ದಾಖಲೆಯನ್ನು ನಿರ್ಮಿಸಿದೆ. ಪಠ್ಯಪುಸ್ತಕ ಖಾಸಗೀಕರಣದ ನಂತರ ಪುಸ್ತಕಗಳ ಮುದ್ರಣ, ಪ್ರಕಟನೆ, ವಿತರಣೆ ಸಮರ್ಪಕವಾಗಿ ನಡೆಯಬೇಕೆಂಬ ಹಂಬಲದಿಂದ ಕರ್ನಾಟಕ ಪಠ್ಯಪುಸ್ತಕ ಪ್ರಕಾಶಕರ ಸಮನ್ವಯ ಸಮಿತಿಯನ್ನು ರಚಿಸಿ ಸಮಿತಿಯ ಸಂಚಾಲಕತ್ವದ ಹೊಣೆ ವಹಿಸಿದವರು ಈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆರ್. ಎಸ್. ರಾಜಾರಾಮ್ ಎಂಬುದನ್ನಿಲ್ಲಿ ಗಮನಿಸಬಹುದಾಗಿದೆ.

1996ರಲ್ಲಿ ಕರ್ನಾಟಕ ಏಕೀಕರಣದ ನಲವತ್ತನೇ ವರ್ಷದ ಕೊಡುಗೆಯಾಗಿ ಡಾ|| ಎಚ್. ಎಸ್. ಗೋಪಾಲ ರಾವ್ ಸಂಪಾದಿಸಿ ನಿರೂಪಿಸಿರುವ ಕರ್ನಾಟಕ ಏಕೀಕರಣ ಇತಿಹಾಸ ಪ್ರಕಟವಾಗಿದೆ. ಈ ಕೃತಿಯು ಏಕೀಕರಣಕ್ಕಾಗಿ ದುಡಿದ ಸುಮಾರು 139 ಮಹನೀಯರ ರೇಖಾಚಿತ್ರಗಳನ್ನೂ ಒಳಗೊಂಡಿದೆ. ಇದರ ಜೊತೆಗೆ ಪ್ರೊ|| ಜಿ. ವೆಂಕಟಸುಬ್ಬಯ್ಯನವರು ರಚಿಸಿರುವ ಇಗೋ ಕನ್ನಡ-1 ಸಾಮಾಜಿಕ ನಿಘಂಟು ಸಹ 1996ರಲ್ಲಿ ಪ್ರಕಟವಾಗಿದೆ. ಇದರ ಮುಂದುವರಿದ ಭಾಗ ಇಗೋ ಕನ್ನಡ-2 2001ರಲ್ಲೂ, ಇಗೋ ಕನ್ನಡ-3 2009ರಲ್ಲೂ ಪ್ರಕಟವಾಗಿವೆ.

 

ಡಾ|| ಜಿ. ರಾಮಕೃಷ್ಣ ಅವರ ಪ್ರಧಾನ ಸಂಪಾದಕತ್ವದಲ್ಲಿ ಸ್ವಾತಂತ್ರ್ಯೋತ್ತರ ಭಾರತ ಅವಲೋಕನ 1947-1997 ಮಾಲಿಕೆಯಲ್ಲಿ ವಿವಿಧ ಲೇಖಕರು ಬರೆದಿರುವ 12 ಸಂಪುಟಗಳು 1997ರ ಆಗಸ್ಟ್ ತಿಂಗಳಿಂದ ಪ್ರಾರಂಭವಾಗಿ ನಾಲ್ಕು ಕಂತುಗಳಲ್ಲಿ ಬಿಡುಗಡೆಯಾಗಿವೆ. ಈ ಮಾಲಿಕೆಯ ಕೆಲವು ಕೃತಿಗಳು ಇಂಗ್ಲಿಷ್‌ನಲ್ಲೂ ತರ್ಜುಮೆಗೊಂಡಿವೆ.

ಪ್ರೊ|| ಎಂ. ಎ. ಸೇತುರಾವ್ ಮತ್ತು ಶ್ರೀ ಕೆ. ಎಲ್. ಗೋಪಾಲಕೃಷ್ಣ ರಾವ್ ಸಂಪಾದಕತ್ವದಲ್ಲಿ ಡಿಮೈ 1/4 ಗಾತ್ರದ ಬಹುವರ್ಣದ 740 ಪುಟಗಳ ನವಕರ್ನಾಟಕ ಜ್ಞಾನ-ವಿಜ್ಞಾನ ಕೋಶ ಎಂಬ ನಾಲ್ಕು ಸಚಿತ್ರ ಸಂಪುಟಗಳು 1998ರಲ್ಲಿ ಪ್ರಕಟವಾಗಿವೆ. ಮೊದಲ ಮುದ್ರಣ ಪ್ರಕಟವಾದ ಒಂದು ವರ್ಷದೊಳಗಾಗಿ ಓದುಗರ ಪ್ರೋತ್ಸಾಹದಿಂದ ಎರಡನೇ ಮುದ್ರಣ ಕಂಡಿರುವುದು ಈ ಸಂಪುಟಗಳ ಸಫಲತೆಯ ದ್ಯೋತಕವಾಗಿದೆ. ಅಂತರರಾಷ್ಟ್ರೀಯ ಮಟ್ಟದ ಮುದ್ರಣ ವಿನ್ಯಾಸ ಹೊಂದಿರುವ ಈ ಕೃತಿಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ದೊರೆತಿವೆ.

ನವಕರ್ನಾಟಕ ಸಾಹಿತ್ಯ ಸಂಪದ ಮಾಲಿಕೆಯಲ್ಲಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರಾದ ಕನ್ನಡ ಲೇಖಕರ ಬದುಕು-ಬರೆಹ ಕುರಿತ ಪುಸ್ತಕಗಳು ಪ್ರಕಟವಾಗುತ್ತಿವೆ. 2001ರಲ್ಲಿ ಮೊದಲ ಕಂತಿನ 12 ಪುಸ್ತಕಗಳು ಬಿಡುಗಡೆಯಾದವು. ಎರಡನೇ ಕಂತಿನ 12 ಪುಸ್ತಕಗಳ ಅನಾವರಣ 2002ರಲ್ಲಿ ನಡೆಯಿತು. ಮೂರನೇ ಕಂತಿನ 12 ಪುಸ್ತಕಗಳು 2006ರಲ್ಲಿ ಹೊರಬಂದವು. 2009ರಲ್ಲಿ ನಾಲ್ಕನೆ ಕಂತಿನ 8 ಪುಸ್ತಕಗಳು ಲೋಕಾರ್ಪಣೆಗೊಂಡವು. ಮುಂದಿನ ವರ್ಷಗಳಲ್ಲಿ ಉಳಿದ ಸಂಪುಟಗಳು ಪ್ರಕಟವಾಗಲಿವೆ. ಡಾ|| ಪ್ರಧಾನ್ ಗುರುದತ್ತ ಈ ಮಾಲಿಕೆಯ ಸಂಪಾದಕರು. ಮೊದಲ ಕಂತಿನ ಪುಸ್ತಕಗಳಿಗೆ ಡಾ|| ಹಾ. ಮಾ. ನಾಯಕ ಅವರೂ ಸಂಪಾದಕರಾಗಿದ್ದರು.

ಶ್ರೀ ಎನ್. ಎಸ್. ವೆಂಕಟರಾಮ್ ಬರೆದಿರುವ ನವಕರ್ನಾಟಕ ಕೈಪಿಡಿ : ರಂಗಭೂಮಿ ಸುಮಾರು 200 ಪುಟಗಳ, ನೂರಾರು ಚಿತ್ರಗಳನ್ನು ಒಳಗೊಂಡ ಬೃಹತ್ ಗ್ರಂಥ. ರಂಗಭೂಮಿಯ ಇತಿಹಾಸವನ್ನು, ರಂಗಕಲೆಯ ಕಾರ್ಯತಂತ್ರಗಳನ್ನು ತಿಳಿಸಿಕೊಡುವ ಮಾರ್ಗದರ್‍ರ್ಶಕ ಕೈಪಿಡಿ 2001ರಲ್ಲಿ ಪ್ರಕಟವಾಗಿದೆ.

ಭಾರತ ಸ್ವಾತಂತ್ರ್ಯ ಸಂಗ್ರಾಮ ಕುರಿತ ಮಹಾನ್ ಕೃತಿ ಕೋ. ಚೆನ್ನಬಸಪ್ಪ ಅವರ ಬೇಡಿ ಕಳಚಿತು ದೇಶ ಒಡೆಯಿತು . ಈ ರೋಮಾಂಚಕಾರಿ ಬೃಹತ್ ಕಾದಂಬರಿ 2001ರಲ್ಲಿ ಪ್ರಕಟವಾಗಿದ್ದು, ಓದುಗರ ಮೆಚ್ಚುಗೆಯನ್ನು ಪಡೆದಿದೆ. ಈ ಕೃತಿಗೆ 2003ರ ‘ಉಗ್ರಾಣ ಪ್ರಶಸ್ತಿ’ ಪ್ರಾಪ್ತವಾಗಿದೆ.

ವಿಜ್ಞಾನ ಪದವಿವರಣ ಕೋಶದ ಪ್ರಕಟಣೆ ನವಕರ್ನಾಟಕದ ಹೆಮ್ಮೆಯ ಯೋಜನೆಗಳಲ್ಲೊಂದು. ಶ್ರೀ ಜಿ. ಟಿ. ನಾರಾಯಣರಾವ್ ಇದರ ಪ್ರಧಾನ ಸಂಪಾದಕರು. 2001ರಲ್ಲಿ ಬಿಡುಗಡೆಯಾದ ಈ ಕೃತಿ ವಿಜ್ಞಾನ ಲೇಖಕರಿಗೆ ಹಾಗೂ ಶಿಕ್ಷಕರಿಗೆ ಅತ್ಯುಪಯುಕ್ತ ಕೈಪಿಡಿಯಾಗಿದೆ.

ವ್ಯಕ್ತಿ ವಿಕಸನ ಮಾಲೆಯಲ್ಲಿ ಮೊದಲ ಕಂತಿನ 12 ಪುಸ್ತಕಗಳನ್ನು 2004ರಲ್ಲಿ ಹಾಗೂ ಎರಡನೇ ಕಂತಿನ 25 ಪುಸ್ತಕಗಳನ್ನು 2007ರಲ್ಲಿ ಪ್ರಕಟಿಸಲಾಗಿದೆ. ಡಾ|| ಸಿ. ಆರ್. ಚಂದ್ರಶೇಖರ್ ಈ ಮಾಲೆಯ ಸಂಪಾದಕರು. ಹಲವು ಖ್ಯಾತ ವೈದ್ಯರು, ಶಿಕ್ಷಕರು, ಆಯಾ ಕ್ಷೇತ್ರದ ತಜ್ಞ ಲೇಖಕರು ಈ ಮಾಲಿಕೆಗಾಗಿ ಪುಸ್ತಕಗಳನ್ನು ರಚಿಸಿದ್ದಾರೆ. ಈ ಮಾಲೆಯ ಕೃತಿಗಳು ಅತ್ಯಂತ ಜನಪ್ರಿಯವಾಗಿವೆ.

ಪುಸ್ತಕ ಪ್ರಕಟಣೆಯ ಜೊತೆಗೆ ನವಕರ್ನಾಟಕ ಹೊಸತು ಎಂಬ ತಿಂಗಳ ಪತ್ರಿಕೆಯನ್ನು 1999 ಆಗಸ್ಟ್ ತಿಂಗಳಿಂದ ಪ್ರಕಟಿಸುತ್ತಿದೆ. ಸಮಕಾಲೀನ ವಿಷಯಗಳಿಗೆ ಸ್ಪಂದಿಸುತ್ತ, ಓದುಗರನ್ನು ಚಿಂತನೆಗೆ ಪ್ರಚೋದಿಸುವ ಈ ಪತ್ರಿಕೆ ನೆಮ್ಮದಿಯ ನಾಳೆ ನಮ್ಮದು ಎಂಬ ಆಶಯದೊಂದಿಗೆ ಪ್ರಜ್ಞಾವಂತ ಓದುಗರು ಆತ್ಮೀಯತೆಯಿಂದ ಬರಮಾಡಿಕೊಳ್ಳುವ ಮಾಧ್ಯಮವಾಗಿ ರೂಪುಗೊಂಡಿದೆ. ಇದು ಸಾಕಷ್ಟು ಓದುಗರ ಹಾಗೂ ಲೇಖಕರ ಬಳಗವನ್ನೂ ರೂಪಿಸಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಡಾ|| ಜಿ. ರಾಮಕೃಷ್ಣ ಇದರ ಸಂಪಾದಕರು.

ಹೊಸತು ವಾಚಿಕೆ ಒಂದು ವಿಶಿಷ್ಟ ಯೋಜನೆ. ಹೊಸತು ಪತ್ರಿಕೆಯ ಪ್ರಾರಂಭದ ಐದು ವರ್ಷಗಳಲ್ಲಿ ಪ್ರಕಟವಾಗಿರುವ ಅತ್ಯುತ್ತಮ ಲೇಖನಗಳನ್ನು ವಿಷಯವಾರು ಸಂಗ್ರಹಿಸಿ, ಹದಿನೆಂಟು ಸಂಪುಟಗಳಲ್ಲಿ ಪ್ರಕಟಿಸಿ, 2006ರಲ್ಲಿ ಈ ಸಂಪುಟಗಳನ್ನು ಅನಾವರಣಗೊಳಿಸಲಾಯಿತು.

2006ರಲ್ಲಿ ಮಕ್ಸಿಂ ಗೋರ್ಕಿಯವರ ಜಗತ್ಪ್ರಸಿದ್ಧ ಕೃತಿ ತಾಯಿ ಮತ್ತು ಐ. ಲಾವ್ರೆತ್‍ಸ್ಕಿಯವರ ಅರ್ನೆಸ್ಟೊ ಚೆ ಗುವಾರ ಅವರ ಜೀವನ ಚರಿತ್ರೆ ಮತ್ತು ಪ್ರೊ|| ಎ. ಎನ್. ಮೂರ್ತಿರಾಯರ ದೇವರು ಕೃತಿಯ ಇಂಗ್ಲಿಷ್ ಅನುವಾದ God - ಮುಂತಾದ ಕೃತಿಗಳು ಪ್ರಕಟವಾಗಿವೆ.

ನೊಬೆಲ್ ಪುರಸ್ಕೃತರು - ಸಮಗ್ರ ಮಾಹಿತಿ ಕೋಶ ಎಂಬ ಬೃಹತ್ ಸಂಪುಟವು 2008ರಲ್ಲಿ ಪ್ರಕಟವಾಗಿದೆ. ಶ್ರೀ ಸಿ. ಆರ್. ಕೃಷ್ಣರಾವ್ ಅವರು ರಚಿಸಿರುವ ಈ ಕೃತಿ ಪ್ರಾರಂಭದಿಂದ 2007ರವರೆಗೆ ಸಾಹಿತ್ಯ, ಶಾಂತಿ, ಭೌತವಿಜ್ಞಾನ, ರಸಾಯನ ವಿಜ್ಞಾನ, ವೈದ್ಯವಿಜ್ಞಾನ ಮತ್ತು ಅರ್ಥಶಾಸ್ತ್ರ ಕ್ಷೇತ್ರಗಳಿಗಾಗಿ ಪ್ರಶಸ್ತಿ ಪಡೆದ 774 ಮಂದಿ ಗಣ್ಯರ ಚಿತ್ರಗಳ ಸಹಿತ ಅವರ ಬದುಕು ಸಾಧನೆಗಳ ಸಮಗ್ರ ಮಾಹಿತಿಯನ್ನೊಳಗೊಂಡಿದೆ. 2010ರವರೆಗಿನ ಮಾಹಿತಿಗಳನ್ನು ಸೇರಿಸಿದ ವಿಸ್ತೃತ ಪರಿಷ್ಕೃತ ಆವೃತ್ತಿ 2011ರಲ್ಲಿ ಪ್ರಕಟವಾಗಿದೆ.

ಶಿಕ್ಷಕರಿಗೆಂದೇ ವಿಶೇಷವಾಗಿ ರಚಿಸಲ್ಪಟ್ಟ ಸಂಪನ್ಮೂಲ ಪುಸ್ತಕಗಳಾದ ವನ ಸಂಜೀವನ, ಕಲಿಕೆಯಲ್ಲಿ ಕಲೆ, ಶಿಕ್ಷಣ ರೂಪಾಂತರ ಮುಂತಾದ ಮಹತ್ವದ ಕೃತಿಗಳು 2008ರಲ್ಲಿ ಹೊರಬಂದಿವೆ.

ನವಕರ್ನಾಟಕ ಪ್ರಕಾಶನದ ಮತ್ತೊಂದು ವೈಶಿಷ್ಟ್ಯವೆಂದರೆ ಪುಸ್ತಕ ಪ್ರದರ್ಶನಗಳ ಮೂಲಕ ಓದುಗರಲ್ಲಿಗೇ ಪುಸ್ತಕಗಳನ್ನು ಒಯ್ಯುವುದು. ಕಳೆದ ಐದು ದಶಕಗಳಿಂದಲೂ ಪುಸ್ತಕ ಪ್ರದರ್ಶನಗಳ ಮೂಲಕ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ಕಾಯಕದಲ್ಲಿ ನಿರಂತರ ತೊಡಗಿಕೊಂಡಿರುವ ಸಂಸ್ಥೆಯೆಂದರೆ ನವಕರ್ನಾಟಕವೊಂದೇ. ನವಕರ್ನಾಟಕ ಪುಸ್ತಕ ಮಳಿಗೆಗಳಿರುವ ಬೆಂಗಳೂರು, ಮಂಗಳೂರು, ಮೈಸೂರು, ಗುಲಬರ್ಗಾ ನಗರಗಳೇ ಅಲ್ಲದೆ, ಕರ್ನಾಟಕದ ಇತರ ಜಿಲ್ಲಾ, ತಾಲ್ಲೂಕು ಸ್ಥಳಗಳಲ್ಲಿಯೂ ಪುಸ್ತಕಗಳು ಲಭಿಸಲು ಈ ಪ್ರದರ್ಶನಗಳಿಂದ ಸಾಧ್ಯವಾಗುತ್ತದೆ. ಹಾಗಾಗಿ, ನವಕರ್ನಾಟಕ ಸಂಸ್ಥೆ ಓದುಗರ ಪ್ರಕಾಶನವಾಗಿ ಗುರುತಿಸಲ್ಪಟ್ಟಿದೆ.

ಪುಸ್ತಕ ಪ್ರಕಟಣೆ, ಮಾರಾಟ ಮತ್ತು ಬೇರೆ ಬೇರೆ ಸ್ಥಳಗಳಲ್ಲಿ ಪುಸ್ತಕ ಪ್ರದರ್ಶನ ಏರ್ಪಡಿಸುವುದೇ ಅಲ್ಲದೆ, ಕಾಲೇಜು ವಿದ್ಯಾರ್ಥಿಗಳಲ್ಲಿ ಆರೋಗ್ಯ-ವೈದ್ಯಕೀಯ ಪುಸ್ತಕಗಳ ಓದಿನ ಆಸಕ್ತಿ ಬೆಳೆಸುವ ಉದ್ದೇಶದಿಂದ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಬೆಂಗಳೂರಿನ ಹಲವು ಕಾಲೇಜುಗಳಲ್ಲಿ ಕನ್ನಡದ ಆರೋಗ್ಯ-ವೈದ್ಯಕೀಯ ಪುಸ್ತಕಗಳ ವಿಮರ್ಶಾ ಸ್ಪರ್ಧೆ ಏರ್ಪಡಿಸಿ, ವಿಜೇತರಿಗೆ ಪುಸ್ತಕ ರೂಪದ ಬಹುಮಾನ ನೀಡುತ್ತಾ ಬಂದಿದೆ.

 

ಓದುಗರಿರುವಲ್ಲಿಗೆ ಪುಸ್ತಕ ಒಯ್ಯುವ ಚಟುವಟಿಕೆಯ ಮುಂದುವರಿಕೆಯಾಗಿ 2003 ರಿಂದ ನವಕರ್ನಾಟಕ ಪ್ರಕಾಶನ ಹಾಗೂ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಬೆಂಗಳೂರು ಶಾಖೆ ಜಂಟಿಯಾಗಿ, ಆಸ್ಪತ್ರೆಯಿಂದ ಆಸ್ಪತ್ರೆಗೆ ವೈದ್ಯ ಸಾಹಿತ್ಯ ಪ್ರಚಾರ ಆಂದೋಲನ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿವೆ. 2003ರ ಜುಲೈನಿಂದ ನವೆಂಬರ್ ತಿಂಗಳವರೆಗೆ ನಗರದ ಇಪ್ಪತ್ತು ಆಸ್ಪತ್ರೆಗಳಲ್ಲಿ ನಡೆದ ಈ ಪುಸ್ತಕ ಪ್ರದರ್ಶನ-ಮಾರಾಟ ಆಂದೋಲನದ ಪ್ರಯೋಜನವನ್ನು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಪಡೆದಿದ್ದಾರೆ. 2004ರ ಡಿಸೆಂಬರ್‌ನಿಂದ 2005ರ ಫೆಬ್ರವರಿವರೆಗೆ ಆಯ್ದ ಆಸ್ಪತ್ರೆಗಳಲ್ಲಿ ಈ ಆಂದೋಲನವನ್ನು ಪುನಃ ಮುಂದುವರೆಸಲಾಗಿತ್ತು.

ಅಲ್ಲದೆ, ರಾಜ್ಯದ ಹಲವು ಶಾಲಾ ಗ್ರಂಥಾಲಯಗಳಿಗೆ ಮತ್ತು ಸಾರ್ವಜನಿಕ ಗ್ರಂಥಾಲಯಗಳಿಗೆ ನವಕರ್ನಾಟಕ ಪ್ರಕಾಶನವು ಪುಸ್ತಕಗಳ ಉಡುಗೊರೆ ನೀಡಿ ವಿದ್ಯಾರ್ಥಿಗಳ ಮತ್ತು ಓದುಗರ ಅರಿವನ್ನು ವಿಸ್ತರಿಸಲು ಸಹಾಯಕವಾಗಿದೆ.

ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಷಯಗಳ ಆಸಕ್ತಿಯನ್ನು ಹೆಚ್ಚಿಸುವ ಪ್ರಯತ್ನವಾಗಿ ಬೆಂಗಳೂರಿನ ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ ಹಾಗೂ ತುಮಕೂರು ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ವಿಮರ್ಶಾ ಸ್ಪರ್ಧೆ ಏರ್ಪಡಿಸಿ ವಿದ್ಯಾರ್ಥಿಗಳಿಗೆ ಪುಸ್ತಕ ರೂಪದ ಬಹುಮಾನ ನೀಡುವ ಯೋಜನೆ, ಆಕಾಶವಾಣಿಯಲ್ಲಿ ನವಕರ್ನಾಟಕ ಸಂಪುಟ ಕಾರ್ಯಕ್ರಮ ಕೇಳಿ, ವಿಮರ್ಶೆ ಬರೆಯುವವರಿಗಾಗಿ ಬಹುಮಾನ ಯೋಜನೆ ಮುಂತಾದ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿವೆ. ದೂರದರ್ಶನದ ಥಟ್ ಅಂತ ಹೇಳಿ ಹಾಗೂ ‘ಈ-ಟಿವಿ’ಯ ಚೂಟಿ ಚುರುಕು ಕ್ವಿಜ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗೆದ್ದವರಿಗೆ ಪುಸ್ತಕ ಉಡುಗೊರೆ ನೀಡುವ ಮೂಲಕವೂ ಜ್ಞಾನ ಪ್ರಸಾರಕ್ಕೆ ನೆರವಾಗಿದೆ. 2003-04ರಲ್ಲಿ ದೂರದರ್ಶನದ ಮೋ..ಮೋ..ಮೋ..ಮೋಜು ಎಂಬ ಯುವರಂಜನಿ ಕಾರ್‍ರ್ಯಕ್ರಮದಲ್ಲಿ ಭಾಗವಹಿಸಿದವರಿಗೂ ಉಡುಗೊರೆ ನೀಡಿ ಪ್ರೋತ್ಸಾಹಿಸಿದೆ. 2006ರ ಡಿಸೆಂಬರ್‌ನಿಂದ 2007ರ ಮಾರ್ಚ್‍ವರೆಗೆ ಬೆಂಗಳೂರು ಆಕಾಶವಾಣಿಯ ‘ಎಫ್.ಎಮ್. ರೈನ್‍ಬೋ’ದಲ್ಲಿ ಪುಸ್ತಕ ಪರಿಚಯ ಕಾರ್ಯಕ್ರಮವನ್ನು 13 ವಾರಗಳ ಕಾಲ ಪ್ರಾಯೋಜಿಸಿದೆ ಹಾಗೂ ವಿಜೇತರಿಗೆ ಪುಸ್ತಕ ಬಹುಮಾನ ಮತ್ತು ಲೇಖಕರೊಂದಿಗೆ ಸಂವಾದ ಏರ್ಪಡಿಸಿದೆ. ಉದಯ ಟಿವಿಯ ಕರ್ನಾಟಕ ಮೇರು ಬಾಲ ಪ್ರತಿಭೆ ಕಾರ್ಯಕ್ರಮದ ವಿಜೇತರಿಗೂ ಪುಸ್ತಕ ಉಡುಗೊರೆ ನೀಡಿ ಪ್ರೋತ್ಸಾಹಿಸಿದೆ.

2009-10 ಹಾಗೂ 2010-11ರಲ್ಲಿ ತನ್ನ ಚಿನ್ನದ ಹಬ್ಬದ ಸಂದರ್ಭದಲ್ಲಿ ನವಕರ್ನಾಟಕ ಪ್ರಕಾಶನ ಹಲವು ಹೊಸ ಯೋಜನೆಗಳನ್ನು ಯಶಸ್ವಿಯಾಗಿ ನೆರವೇರಿಸಿದೆ. ಈ ಸಾಲಿನಲ್ಲಿ ಪ್ರಕಟವಾದ ಎಲ್ಲ ಕೃತಿಗಳೂ ‘ಚಿನ್ನದ ಚಿಗುರು’ ಎಂಬ ಗುರುತನ್ನು ಹೊಂದಿವೆ.

ಇವುಗಳಲ್ಲಿ ಪ್ರಮುಖವಾದ ಒಂದು ಯೋಜನೆ ವನಿತಾ ಚಿಂತನ ಮಾಲೆ. 2009ರಲ್ಲಿ ಪ್ರಕಟವಾದ ಇದರ ಮೊದಲ ಕಂತಿನ ಪುಸ್ತಕಗಳು ಮಹಿಳೆಯರ ಬವಣೆಯ ಬದುಕಿಗೊಂದು ಬೆಳಕಿಂಡಿ. ಹಲವು ಭಾರತೀಯ ಭಾಷೆಗಳಿಂದ ಆಯ್ದ ಆತ್ಮಕಥೆಗಳ ಹಾಗೂ ಕಾದಂಬರಿಗಳ ಕನ್ನಡಾನುವಾದಗಳಲ್ಲದೆ ಕನ್ನಡದ ಲೇಖಕರು ಮಹಿಳೆಯರ ಕುರಿತು ರಚಿಸಿರುವ ಕೃತಿಗಳೂ ಸೇರಿದಂತೆ ಒಟ್ಟು ಹನ್ನೊಂದು ಕೃತಿಗಳು ಈ ಕಂತಿನಲ್ಲಿ ಹೊರಬಂದಿವೆ. ಇದೇ ಮಾಲಿಕೆಯ 2ನೇ ಕಂತಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳನ್ನು ಕುರಿತಾದ ಆರು ಕೃತಿಗಳು 2010ರಲ್ಲಿ ಪ್ರಕಟವಾಗಿವೆ.

ಪ್ರೊ|| ಡಿ. ಆರ್. ಬಳೂರಗಿಯವರ ಸಂಪಾದಕತ್ವದಲ್ಲಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅಧ್ಯಾಪಕರಿಗಾಗಿ ವಿಜ್ಞಾನ - ಸರಳ ಪರಿಚಯ ಮಾಲಿಕೆಯ ಕೃತಿಗಳನ್ನು ರಚಿಸಲಾಗಿದೆ. ವಿದ್ಯಾರ್ಥಿಗಳಿಗೆ ಮತ್ತು ವಿಜ್ಞಾನಾಸಕ್ತರಿಗೆ ಕೂಡ ಇವು ಅತ್ಯುಪಯುಕ್ತ ಕೈಪಿಡಿಗಳಾಗಿವೆ. ಈ ಮಾಲಿಕೆಯ ಮೊದಲ ಕಂತಿನ 14 ಪುಸ್ತಕಗಳು 2010ರ ಏಪ್ರಿಲ್ ತಿಂಗಳಲ್ಲಿ ಅನಾವರಣಗೊಂಡಿವೆ. ಉಳಿದವು 2011ರಲ್ಲಿ ಹೊರಬೀಳಲಿವೆ.

ನವಕರ್ನಾಟಕ ಪ್ರಕಾಶನದ ಮಹತ್ವಾಕಾಂಕ್ಷೆಯ ಕರ್ನಾಟಕ ಕಲಾದರ್ಶನ ಎಂಬ ವಿಶೇಷ ಆಕರ ಗ್ರಂಥವು ಪ್ರೊ|| ಎಂ. ಎಚ್. ಕೃಷ್ಣಯ್ಯ, ಡಾ|| ವಿಜಯಾ ಮತ್ತು ಶ್ರೀ. ಸಿ. ಆರ್. ಕೃಷ್ಣರಾವ್ ಅವರ ಸಂಪಾದಕತ್ವದಲ್ಲಿ ಪ್ರಕಟವಾಗಿದೆ. ಡಿಮೈ 1/4 ಗಾತ್ರದ 1280 ಪುಟಗಳಿರುವ ಈ ಪುಸ್ತಕವನ್ನು ವರ್ಣಚಿತ್ರಗಳ ಸಹಿತ ಆರ್ಟ್ ಕಾಗದದಲ್ಲಿ ಮುದ್ರಿಸಲಾಗಿದೆ. ಸುಮಾರು 4300 ಚಿತ್ರಗಳ ಹಾಗೂ ಉಪಯುಕ್ತ ಮಾಹಿತಿಗಳ ಮೂಲಕ ಕರ್ನಾಟಕದ ಸಮಗ್ರ ಕಲೆಗಳ ಪರಿಚಯ ಮಾಡಿಕೊಡುವ ಈ ಕಲಾಕೋಶವು 2010ರ ಆಗಸ್ಟ್ ತಿಂಗಳಿನಲ್ಲಿ ಸಂಸ್ಥೆಯ ಸುವರ್ಣ ಮಹೋತ್ಸವದ ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿದೆ. ಈ ಪುಸ್ತಕದ ಜೊತೆ ಅದರ ಸಿ.ಡಿ. ಉಚಿತ.

ಡಾ|| ಸಿ. ವೀರಣ್ಣ ಅವರ ಕನ್ನಡ ಸಾಹಿತ್ಯ - ಚಾರಿತ್ರಿಕ ಬೆಳವಣಿಗೆ ಮಾಲಿಕೆಯ ಎರಡು ಸಂಪುಟಗಳು 2011ರ ಜನವರಿ ತಿಂಗಳಲ್ಲಿ ಹೊರಬಂದಿವೆ.

ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಬಣ್ಣದ ಚಿತ್ರಗಳುಳ್ಳ ನವಕರ್ನಾಟಕ ಜ್ಞಾನ-ವಿಜ್ಞಾನ ಮಾಲೆಯ ಪುಸ್ತಕಗಳು 2011ರ ಫೆಬ್ರವರಿ ತಿಂಗಳಲ್ಲಿ ಪ್ರಕಟಗೊಂಡಿವೆ. ತಜ್ಞ ಲೇಖಕರು ಇವನ್ನು ರಚಿಸಿದ್ದು, ಪ್ರೊ|| ಅಡ್ಯನಡ್ಕ ಕೃಷ್ಣಭಟ್ ಅವರು ಈ ಮಾಲೆಯ ಸಂಪಾದಕರು.

ನಿರಂಜನರ ಸಂಪಾದಕತ್ವದಲ್ಲಿ 1980-82ರಲ್ಲಿ ಬೆಳಕು ಕಂಡಿದ್ದ ವಿಶ್ವ ಕಥಾ ಕೋಶ 25 ಸಂಪುಟಗಳೂ 2011ರ ಎಪ್ರಿಲ್ ತಿಂಗಳಲ್ಲಿ ಮರುಮುದ್ರಣವಾಗಿವೆ.

ನವಕರ್ನಾಟಕ ವಿಜ್ಞಾನ-ತಂತ್ರಜ್ಞಾನ ಪದಸಂಪದ ಎಂಬ ಬೃಹತ್ ಶಬ್ದಾರ್ಥ ವಿವರಣ ಕೋಶವು ಶ್ರೀ ಕೆ. ಎಲ್. ಗೋಪಾಲಕೃಷ್ಣ ರಾವ್, ಶ್ರೀ ಟಿ. ಆರ್. ಅನಂತರಾಮು ಮತ್ತು ಶ್ರೀ ಸಿ. ಆರ್. ಕೃಷ್ಣರಾವ್ ಅವರ ಸಂಪಾದಕತ್ವದಲ್ಲಿ 2011ರ ಮೇ ತಿಂಗಳಲ್ಲಿ ಪ್ರಕಟವಾಗಿದೆ.

ಪ್ರೊ|| ಸಿ. ಎನ್. ಆರ್. ರಾವ್ ಅವರ Nanoworld - An Introduction to Nanoscience and Technology ಇಂಗ್ಲಿಷ್ ಮೂಲ ಮತ್ತು ಕನ್ನಡ ಅನುವಾದ ಕೂಡ 2011ರಲ್ಲಿ ಪ್ರಕಟವಾಗಲಿವೆ.

ಪ್ರಕಾಶನ ರಂಗದಲ್ಲಿ ಐದು ದಶಕಗಳ ಸಾರ್ಥಕ ಸೇವೆಯನ್ನು ಸಲ್ಲಿಸಿರುವ ನವಕರ್ನಾಟಕ ಪ್ರಕಾಶನ ತನ್ನ ಚಿನ್ನದ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಮೇಲೆ ತಿಳಿಸಿದ ಹಾಗೂ ಇನ್ನಿತರ ಹಲವು ಯೋಜನೆಗಳನ್ನು ಸಾಕಾರಗೊಳಿಸಿದೆ. ಈ ಎಲ್ಲ ಯೋಜನೆಗಳ ಯಶಸ್ಸಿಗೆ ಕಾರಣಕರ್ತರಾದ ನಮ್ಮ ಲೇಖಕರಿಗೆ ಹಾಗೂ ಓದುಗರಿಗೆ ನಾವು ಕೃತಜ್ಞರು.

ಪ್ರಗತಿಶೀಲ ಚಳುವಳಿಯೊಂದಿಗೆ ಹೀಗೆ ಹೆಜ್ಜೆ ಹಾಕುತ್ತಿರುವ ನವಕರ್ನಾಟಕ ಪ್ರಕಾಶನಕ್ಕೆ ನಿಮ್ಮ ಬೆಂಬಲ ಸದಾ ಇರಲಿ. ಜನಪರ ಪುಸ್ತಕ ಸಂಸ್ಕೃತಿ ಉಳಿಸಿ; ಬೆಳೆಸಿ.

 

 

 






ಸುದ್ದಿಯ ಮಿಂಚಂಚೆ
ಸುದ್ದಿಯ ಮಿಂಚಂಚೆ ಪಡೆಯಲು ನಿಮ್ಮ ಈಮೈಲ್ ವಿಳಾಸವನ್ನು ನೊಂದಾಯಿಸಿ

 
 
Flipkart.com
jeux de casino
 
ಮುಖಪುಟ | ನಮ್ಮ ಬಗ್ಗೆ | ಕಾರ್ಯಕ್ರಮಗಳು | ವಿಮರ್ಶೆಗಳು | ಬೇಡಿಕೆ | ಹೊಸತು-ತಿಂಗಳ ಪತ್ರಿಕೆ| ಸಂಪರ್ಕಿಸಿ

Copyright © 2011. ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್., ಬೆಂಗಳೂರು.