ಹೊಸತು

ಹೊಸತು - ತಿಂಗಳ ಪತ್ರಿಕೆ :

ನವಕರ್ನಾಟಕ ಪ್ರಕಾಶನ ಈಗ ತಾನೆ ಚಿನ್ನದ ಹಬ್ಬವನ್ನು ಸಂಭ್ರಮದಿಂದ ಆಚರಿಸಿದೆ. ಈ ಸಂಸ್ಥೆ 1960ರಿಂದ ಐದು ದಶಕಗಳ ಕಾಲ ನಿರಂತರವಾಗಿ ಪುಸ್ತಕಗಳ ಪ್ರಕಾಶನ-ಪ್ರದರ್ಶನ-ಮಾರಾಟ ಚಟುವಟಿಕೆ ಹಾಗೂ ಸಾಹಿತ್ಯಕ ಕಾರ್ಯಕ್ರಮಗಳ ಮೂಲಕ ಕರ್ನಾಟಕದಾದ್ಯಂತ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತ ಬಂದಿದೆ. ‘ಪುಸ್ತಕಗಳ ಮೂಲಕ ಮನುಕುಲದ ಸೇವೆ’ ಎಂಬುದೇ ಇದರ ಧ್ಯೇಯವಾಕ್ಯ.

ಈವರೆಗೆ 3100ಕ್ಕೂ ಹೆಚ್ಚು ಪ್ರಕಟಣೆಗಳನ್ನು ಹೊರತಂದಿರುವ ನವಕರ್ನಾಟಕ ಪ್ರಕಾಶನದ ಅನೇಕ ಶೀರ್ಷಿಕೆಗಳು ಹಲವಾರು ಮರುಮುದ್ರಣಗಳನ್ನು ಕಂಡಿರುವುದು ಅವುಗಳ ಜನಪ್ರಿಯತೆಗೆ ಸಾಕ್ಷಿ. ಜನಪರ ಸಾಹಿತ್ಯ ಪ್ರಸಾರದ ಮೂಲಕ ನಾಡಿನ ಬುದ್ಧಿಜೀವಿಗಳಿಂದ ಹಿಡಿದು ಶ್ರೀಸಾಮಾನ್ಯನವರೆಗೆ ಓದುಗರ ದೊಡ್ಡ ಬಳಗವನ್ನೇ ಈ ಸಂಸ್ಥೆ ಹೊಂದಿದೆ. ಪ್ರಕಾಶನ ಕ್ಷೇತ್ರದ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಕೂಡ ತನ್ನದಾಗಿಸಿಕೊಂಡಿದೆ. ಬೆಂಗಳೂರು, ಮೈಸೂರು, ಮಂಗಳೂರು, ಗುಲಬರ್ಗಾ ನಗರಗಳಲ್ಲಿ ಸುಸಜ್ಜಿತ ಖಾಯಂ ಮಳಿಗೆಗಳನ್ನು ಹೊಂದಿರುವುದಲ್ಲದೆ ವರ್ಷಂಪ್ರತಿ ರಾಜ್ಯಾದ್ಯಂತ ನೂರಾರು ಕಡೆ ಪುಸ್ತಕ ಪ್ರದರ್ಶನಗಳನ್ನು ನಡೆಸುತ್ತ ಓದುಗರಿರುವಲ್ಲಿಗೇ ಸದಭಿರುಚಿಯ ಪುಸ್ತಕಗಳನ್ನು ಒಯ್ಯುವುದು ನವಕರ್ನಾಟಕ ಪ್ರಕಾಶನದ ವೈಶಿಷ್ಟ್ಯವಾಗಿದೆ.

ಕನ್ನಡ ಪುಸ್ತಕ ಸಂಸ್ಕೃತಿಯನ್ನು ಹರಡಲು ಗಣನೀಯ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರವು ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗೆ 2006ರ ‘ಅತ್ಯುತ್ತಮ ಪ್ರಕಾಶನ ಸಂಸ್ಥೆ’ ಪ್ರಶಸ್ತಿ ನೀಡಿ ಗೌರವಿಸಿದೆ.

ಕನ್ನಡ ಸಾಹಿತ್ಯ ಪರಿಷತ್ತು 2010ರ ‘ಅತ್ಯುತ್ತಮ ಪ್ರಕಾಶಕ-ಅಂಕಿತ ಪುಸ್ತಕ-ಪುರಸ್ಕಾರ’ವನ್ನು ನವಕರ್ನಾಟಕ ಪ್ರಕಾಶನ ಸಂಸ್ಥೆಗೆ ನೀಡಿದೆ.

ತನ್ನ ಪ್ರಕಟಣೆಗಳ ಮೂಲಕ ಎಲ್ಲ ಪ್ರಗತಿಪರರೊಂದಿಗೆ, ಜನಪರ ಚಳುವಳಿಗಳೊಂದಿಗೆ ಗುರುತಿಸಿಕೊಂಡಿರುವ ನವಕರ್ನಾಟಕ ಪ್ರಕಾಶನ ಸಂಸ್ಥೆಯ ಹೆಮ್ಮೆಯ ಕೊಡುಗೆ ಹೊಸತು. ಸಮಕಾಲೀನ ವಿಷಯಗಳಿಗೆ ಸ್ಪಂದಿಸುತ್ತ, ಓದುಗರನ್ನು ಚಿಂತನೆಗೆ ಪ್ರಚೋದಿಸುವ, ಸದಭಿರುಚಿಯ ಓದನ್ನು ನೀಡುವ ಹೊಸತು ಎಲ್ಲ ಸಹೃದಯ ಓದುಗರ ಪತ್ರಿಕೆಯಾಗುವುದೆಂಬ ವಿಶ್ವಾಸ ನಮ್ಮದು.

ಪತ್ರಿಕಾರಂಗದಲ್ಲಿ ಹನ್ನೆರಡು ವರುಷಗಳ ಯಶಸ್ವೀ ಪ್ರಕಟಣೆಯ ನಂತರ ಇಂದಿಗೂ ಪ್ರಗತಿಪಥದಲ್ಲಿ ಮುಂದೆ ಸಾಗುತ್ತಿದೆ ಹೊಸತು.

ಈ ತಿಂಗಳ ಪತ್ರಿಕೆಯ ವಿಶೇಷವಾದರೂ ಏನು ? ಇದರಲ್ಲಿ ಏನಿದೆ ಹೊಸತು ?

‘ನೆಮ್ಮದಿಯ ನಾಳೆ ನಮ್ಮದು’ ಎಂಬ ಧ್ಯೇಯವಾಕ್ಯದಲ್ಲಿಯೇ ಇದರ ಆಶಯವನ್ನು ಗುರುತಿಸಬಹುದು. ಕಲೆ, ಸಾಹಿತ್ಯ, ಸಂಸ್ಕೃತಿಯಂಥ ವಿಷಯಗಳಲ್ಲದೆ, ತತ್ವಶಾಸ್ತ್ರ, ಅರ್ಥಶಾಸ್ತ್ರ, ವಿಜ್ಞಾನ ಇಂಥ ವಿಷಯಗಳನ್ನು ಸಹ ಸಾಮಾನ್ಯ ಓದುಗರಿಗೆ ತಲುಪಿಸಲು ಪ್ರಯತ್ನಿಸುತ್ತಿರುವ ಪತ್ರಿಕೆ ಹೊಸತು.

ಕಳೆದ ಒಂದು ದಶಕದ ಅವಧಿಯಲ್ಲಿ ಹೊಸತು ಸಾವಿರಾರು ಅಭಿಮಾನಿ ಓದುಗರನ್ನು ಹೊಂದಿದೆ. ಅನೇಕ ಹೊಸ ಲೇಖಕರನ್ನು ಬರೆಯುವಂತೆ ಪ್ರೇರೇಪಿಸಿದೆ. ರಾಷ್ಟ್ರೀಯ ಏಕತೆ, ಸಮಾನತೆ, ಸ್ವಾವಲಂಬನೆ, ಜಾತ್ಯತೀತತೆ, ಕೋಮುಸೌಹಾರ್ದತೆ, ವೈಜ್ಞಾನಿಕ ಮನೋಭಾವ - ಈ ಮೌಲ್ಯಗಳನ್ನು, ಸಾಂಸ್ಕೃತಿಕ, ರಾಜಕೀಯ, ಆರ್ಥಿಕ, ಸಾಮಾಜಿಕ ವಿದ್ಯಮಾನಗಳನ್ನು ವಸ್ತುನಿಷ್ಠವಾಗಿ ಜನರಿಗೆ ತಿಳಿಸಿಕೊಡುವ, ಜನಪರ ಚಿಂತನೆಗಳಿಗೆ ಚಾಲನೆ ನೀಡುವ ಜವಾಬ್ದಾರಿಯುತ ಪತ್ರಿಕೆ ಹೊಸತು. ಇದರ ವಾರ್ಷಿಕ ಸಂಚಿಕೆಗಳು ಸಂಗ್ರಹ ಯೋಗ್ಯವೆಂದು ಪರಿಗಣಿಸಲ್ಪಡುವಷ್ಟು ಸಮೃದ್ಧವಾಗಿರುತ್ತವೆ.

ಡಾ|| ಜಿ. ರಾಮಕೃಷ್ಣ ಹೊಸತು ಪತ್ರಿಕೆಯ ಸಂಪಾದಕರು. ಇವರು ಜನಪರ ಹೋರಾಟಗಳಲ್ಲಿ ಸದಾ ಮಂಚೂಣಿಯಲ್ಲಿರುವವರು, ಪ್ರಗತಿಪರ ವಿಚಾರಗಳಿಗೆ ತೆರೆದುಕೊಳ್ಳುವವರು. ಲೇಖನಗಳ ಮತ್ತು ಕ್ರಿಯೆಗಳ ಮೂಲಕ ಚಿಂತನೆಗೆ ಪ್ರೇರಣೆ ನೀಡಬಲ್ಲ ಸಮರ್ಥ ಸಂಪಾದಕೀಯ ಹಾಗೂ ಸಮಾಲೋಚಕ ಮಂಡಳಿಯ ಸಹಕಾರ ಸಂಪಾದಕರಿಗಿದೆ.



ಪುಸ್ತಕ ಬಿಡುಗಡೆ
 
ಸುದ್ದಿಗಳು
 
ಸುದ್ದಿಯ ಮಿಂಚಂಚೆ
ಸುದ್ದಿಯ ಮಿಂಚಂಚೆ ಪಡೆಯಲು ನಿಮ್ಮ ಈಮೈಲ್ ವಿಳಾಸವನ್ನು ನೊಂದಾಯಿಸಿ

 
 
 
ಮುಖಪುಟ | ನಮ್ಮ ಬಗ್ಗೆ | ಕಾರ್ಯಕ್ರಮಗಳು | ವಿಮರ್ಶೆಗಳು | ಬೇಡಿಕೆ | ಹೊಸತು-ತಿಂಗಳ ಪತ್ರಿಕೆ| ಸಂಪರ್ಕಿಸಿ

Copyright © 2011. ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್., ಬೆಂಗಳೂರು.